ಆಗ್ಯೂ-ಈಗ್ಯೂ-ಹಿಂಗ್ಯಾಕಾತ ಆರೋಗ್ಯ..? ಹಂಗ ನೆನಪು..!

 

ಕಾಡಂತ ಕೋರೋನಾ ಬಂದರು ಗಟ್ಟಿಯಾರ್ಬೇಕು ಅಂದರ "ಎಚ್ಚರಾಗಬೇಕು ಇಲ್ಲಾಂದ್ರ ಹುಚ್ಚರಾಗ್ತೇವಿ"




ರೋಗ ಬರಲಿಲ್ಲ್ಯಾಕ ಅವತ್ತ… ಪ್ರತಿರೋಧಕ್ಕ ಔಷಧಿ ಇತ್ತನು.?
ಇಲ್ಲಾ ಇಲ್ಲಾ ಯಾ… ಪ್ರತಿರೋಧ ಔಷಧಿನೂ ಇರಲಿಲ್ಲಾ..!
ಆಹಾರನ ಔಷಧಿಯಾಗಿತ್ತಷ್ಟ…! ಚಟುವಟಕೀನ ಜೀವನಶೈಲಿಯಾಗಿತ್ತಷ್ಟ…!

ಸೈಕಲ್ಲಿನ ಹಿಂದಿನ ಸೀಟಿನ್ಯಾಗ ಕಟ್ಟಿಗೆ ಹಲಗಿ ಮ್ಯಾಲ ತಗಡಿನ ಕೋಟಿಂಗ್ ಇರೋ ಕಟಗಿ ಡಬ್ಬಿ ಇಟ್ಕೊಂಡು ದೂಡುತ್ತ ಬಂದಿದ್ದ ಸೈಕಲ್ ನ್ಯಾಗ ತಂದಿದ್ದ ಐಸ್ ತಿಂದದ್ದು, ಅಲ್ಲದ ಐಸ್ ಡಬ್ಬಿ ಮೂಲಿಯ ತುದಿ ತೂತಿನಿಂದ ಹನಿ-ಹನಿ ಸೋರತಿದ್ದ ಸಿಂವಿ ಹನಿಗಳಿಗೆ ಕೈಯೊಡ್ಡಿ ಚೀಪುತ್ತ ಊರಿಡೀ ಆ ಗಾಡಿ ಹಿಂದೆ ಅಡ್ಡಾಡಿದ್ದು ಯಾರಿಗೆ ನೆನಪಿಲ್ಲಾ.. ಗುಲಾಬಿ ಬಣ್ಣದ ಸಕ್ರಿಲೆ ಮಾಡಿದ್ದ ಅಳ್ಳೀಪವ್ವಾ ತಿಂದದ್ದು ಆಮ್ಯಾಲ ಕೆಂಪಾಗಿದ್ದ ನಾಲಿಗೆ ನೋಡ್ಕೆಂಡು ಯಾರ ನಾಲಿಗೆ ಬಾಳ ಕೆಂಪೈತಿ ಅಂತಾ ಒಬ್ಬರಿಗೊಬ್ಬರು ನೋಡಿಕೊಂಡಿದ್ದು
ಎಲ್ರು ಮಾಡಿದ್ದ ಇದು, ಮತ್ತ… ಬಂಕಾಪುರದಿಂದ ಬರುತ್ತಿದ್ದ ದಾಡಿಯ ಮುದುಕ ಮಾಡಿ ಕೊಟ್ಟ ಪೊಚೆ ಮಿಠಾಯಿಯ ಕೈವಾಚು ಮತ್ತ ಉಂಗುರ ಮಸ್ತ್ ಆಗೇತಿ ಅನಕಂತ ಹಂತ ಹಂತವಾಗಿ ಕೈಗೆ ಬಾಯಿ ಹಚ್ಚಿ ತಿಂದು ನೆಕ್ಕಿ ಹಲ್ಲಾಗ ಸಿಕ್ಕಂಡಿದ್ದ ನ್ಯಾಲಿಗಿಲೆ ಗೆಬಟಿ ಮತ್ತ ತಿಂದಿದ್ದ ನೆನಪು ಮರೆಯುವುದ್ಹೆಂಗ.? ಅಲ್ಲದ ಒಂದಂದ ಬೆರಳಿಗೆ ಸಿಕ್ಕಿಸಿಕೊಂಡು ತಿಂದ ಸಣ್ಣ ಪಾಪಡೆ, ಉದ್ದನ ಪಾಪಡೆ, ಕರಗದೇ ಇರುವ ಕಂಬಾರಗಟ್ಟಿ, ಬಾಯಿಗೆ ನೀರು ಬರಿಸುವಂತಹ ಚಿಗಳಿ, ಮೊಣಕೈವರೆಗೂ ಸೋರಿದ್ರು ಬಿಡದಂಗ ಶೀಪಿ ತಿಂದ ಮಾವಿನ ಕೊಪ್ಪ, ಸಾಲಿ ದಾರ್ಯಾಗ ಹೋಗಮುಂದ ಸಿಗ ಮಂಡಕ್ಕಿ ಉಂಡಿ, ಮತ್ತೆ ಅವತ್ತು ಸಾಲ್ಯಾಗ ಕೊಡೊ ಗಾಟೆ, ಎಷ್ಟೋ ಹುಡುಗರು ಪೇಣೆ ತಿಂದು ಕಳಿತಂತ ಹೇಳುತ್ತಿದ್ದ ನೆನಪು, ಮರೆದು ಹೆಂಗಿದನ್ನ ಬಾಳ ಹಿಂದಿನ ಮಾತು ಏನಲ್ಲಿದು ನಾಲ್ವತ್ತು ವರ್ಷದ ಹಿಂದಷ್ಟ ಇವೆಲ್ಲ ಸಣ್ಣರಿದ್ದಾಗ ಸಾಲಿ ಕಲೆಮುಂದ ನಡೆದಿದ್ದ ನೈಜ ಘಟನೆಗಳು. ಆ ಟೈಮ್‌ನ್ಯಾಗಿನ ಸುಖಾನ ಬ್ಯಾರೆ ಮರೆಂತಾದ ಅಲ್ಲದು, ಅನುಭವಸಿದ್ದದು. ಅದೆಲ್ಲ ಇರಲಿ.
ಆದರ ಈಗ ನಾನು ಹೇಳಾಕ ಹೊಂಟಿರೋದು ಆರೋಗ್ಯದ ಬಗ್ಗೆನ ಅವಾಗ ನಾವೆಲ್ಲ ಸಣ್ಣರಿದ್ದಾಗ ತಿಂದು ಆಡಿ ಓಡಿ ಬೆಳದಿದ್ದು ನೆನಸಿಗೆಂಡ್ರ ಭಯ ಆಕ್ಕತಿ ಯಾಕಂದ್ರ ಅತೀ ಆಸೆ ಪಟ್ಟ ತಿಂದಂತವನ್ನ ಎದರಿಂದ ಮಾಡತಿದ್ರು..
ಹೆಂಗ ಮಾಡತಿದ್ರು, ಅನ್ನ ವಿಚಾರ ಮತ್ತ ಎಷ್ಟ ಸ್ವಚ್ಛತಾದಿಂದ ಮಾಡತಿದ್ರು, ಇದರಲ್ಲಿ ಇರೋ ಜೀವಸತ್ವ ಆದ್ರು ಏನು? ಯಾವುದು? ಅನ್ನೋ ವಿಚಾರಾನ ಒಂದು ಸಂಶೋಧನೆನ ಮಾಡಬೇಕು ಬಿಡ್ರಿ. ಮತ್ತೊಂದ ವಿಚಾರಂದ್ರ ಇದನ್ನೆಲ್ಲ ತಿಂದ ಸಾಲಿ ಹುಡ್ರು ಅಂದ್ರ ನಾವು ನೀವು ಎಷ್ಟ ಗಟ್ಟೆ…ಇದ್ದವಿ..ಇರ್ತಿದ್ವಿ. ಅನ್ನೋದು ಮುಖ್ಯವಾದ ವಿಚಾರ.ಅದರಾಗ ಓಡದು, ಆಡದು, ಬೀಳೋದು, ಎಳೋದು, ಎಲ್ಲಾ….
ಆದರ ಇವತ್ತ ನಾವು ನಮ್ಮ ಮಕ್ಕಳಿಗೇ ಏನು ಕೊಡಾಕತ್ತೇವಿ ಮ್ಯಾಗಿ, ಬೇಕರಿ ತಿನಿಸು, ಬ್ಯಾರೆ ಬ್ಯಾರೆ ತರದ್ದು ಬಿಸ್ಕೀಟಗಳು, ಆಹಾರದ ಪದಾರ್ಥ ಪದ್ಧತಿಗಳ ಬೇರೆ ಆಗ್ಯಾವು. ಮಕ್ಕಳಿಗೆ ನಾವು ಕೊಡಾಕತ್ತಿದ್ದರ ಏನು? ಸ್ವಲ್ಪ ವಿಚಾರ ಮಾಡ್ರಿ. ಬರಿ ಹೊರಗಿನ ಹೋಟೆಲ್‌ಗಳ ಬಾಯಿ ಚಪ್ಪರಿಸುವ ಸವಿರುಚಿಯ ರಾಸಾಯನಿಕ ಪದಾರ್ಥಗಳು ಸೇರಿರೊ ಊಟ. ಹಾಲು ಮನಿವು.. ಡೈರಿವಲ್ಲ ಅನ್ನುತ್ತಾ. ಒಂದೆರಡು ಬ್ರ್ಯಾಂಡ್ ಪಿಕ್ಸ್ ಮಾಡಿಕೊಂಡೇವಿ. ಅವ…ರಾಗಿ ಗಂಜಿ, ಬೇಕರಿ ಬ್ರೆಡ್ಡು, ಕೊಟ್ಟು….ಹಣ್ಣು…ಡ್ರೈ ಫ್ರುಟ್ಸ್.. ಅಂತಾ ಕೊಡ್ತೇವಿ. ಇವೆಲ್ಲದರ ಶುದ್ಧತೆ ಎಲ್ರಿಗೂ ಗೊತ್ತಿದೆ. ಇವೆಲ್ಲ ಎಲ್ಲಿ ಬರಬೇಕ ಅವಾಗ ಸತ್ವ ಮತ್ತು ಸಮತೋಲನದ ಬಗ್ಗೆ ನಮ್ಮನ್ನ ನಾವು ಒಂದು ಸಾರಿ ಕೇಳಿಕೇಬೇಕು ನಾವು ಅವನ್ನೆಲ್ಲ ನೋಡಿದ್ವೆ ಸಣ್ಣರಿದ್ದಾಗ, ಹೋಗ್ಲಿ ಬಿಡ್ರಿ ಆ ವಿಚಾರ.., ಎಲ್ಲಿ ಇದ್ದವು ಆವಾಗ ಫಿಲ್ಟರ್, ಫಿಲ್ಟರ್ ನೀರು ಎಲ್ಲೆಲ್ಲಿ ನೀರು ಯಾವ್ಯಾವ ಕೆರಿ, ಭಾವಿ, ಹೊಳಿ ನೀರು, ವರ್ತಿ ನೀರು, ನೂರೆಂಟು ಕಡೆ ನೀರು ಕುಡಿದು ಬಾಳಿ ಬದುಕಿದ್ರು ನಮ್ಮ ಹಿರಿಯರು, ನೀರಿನ ಬಗ್ಗೆ ಈಗ ಚರ್ಚೆ ಬ್ಯಾಡಾ ಯಾಕಂದ್ರ ನೀರಿನ ಬಗ್ಗೆ ಮಾತನಾಡಾಕತ್ರ ಒಂದು ದಿನ ಮಾತನಾಡಿದ್ರು ಸಾಕಾಗಂಗಲ್ಲ. ಈಗ ಬಂದಿದೆ ಶುದ್ಧ ನೀರು ಮಿನರಲ್ ವಾಟರ್, ಶುದ್ಧ ನೀರು, ಎಲೆಕ್ಟ್ರೋಲೈಟ್ಸ್ ಇರೋ ನೀರು ಅಂತೆಲ್ಲಾ ಅಂತಾರ. ಆದರ ಇದೆಲ್ಲ ಸರಿ ಕಾಯಿಲೆಗಳು ಅವತ್ತಿಗೂ ಇವತ್ತಿಗೂ ಹೊಲಿಸಿಗೆಂಡ್ರ ಇವತ್ತ ಕಾಯಿಲೆಗಳು, ಸೊಂಕುಗಳು, ಜಾಸ್ತಿ ಇವೆ. ಆವಾಗ ಯಾಕಿರಲಿಲ್ಲ ಈಗ್ಯಾಕಿವೆ ಎಷ್ಟು ಸೂಕ್ಷ್ಮ ಆಗೇವಿ ನಾವು ಅನ್ನೋದನ್ನ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗೇತಿ ಇವತ್ತು.? ಕಾಯಿಲೆಗಳು ಬಂದರೂ ರೋಗ ಪ್ರತಿರೋಧ ಶಕ್ತಿ ಇಲ್ಲದಂಗ ಆಗೇತಿ ಯಾಕೆ? ಇದನ್ನೇ ನಾವು ನಮ್ಮಷ್ಟಕ್ಕೆ ಪ್ರಶ್ನೆ ಮಾಡಿಕೊಳ್ಳಬೇಕಾಗೇತಿ.
ಅವತ್ತು ನಾವು ಸಣ್ಣರಿದ್ದಾಗ ಹಳ್ಯಾಗ ಇರ್ತಿದ್ವಿ ಅವತ್ತಂತು ಖರೇನ ಬಿಪಿ, ಶುಗರ್ ಹಾರ್ಟು, ಥೈರೋಯ್ಡ, ಅಂತಾ ಜಡ್ಡು ಇರ್ತಾವು ಅಂತ ಗೊತ್ತೂ ಇದ್ದಿಲ್ಲಾ, ಹೆಸರು ಕೇಳಿದ್ದಿಲ್ಲ. ಇದ್ರು ವೈದ್ಯರು ಮತ್ತು ರೋಗಿಯ ನಡುವಿನ ಚಿಕಿತ್ಸೆ ಸಮಾಲೋಚನೆಯೋಂದಿಗೆ ಚಿಕಿತ್ಸೆ ಮುಗಿದ ಬಿಡ್ತಿತ್ತು ಅನಸ್ತತಿ. ಆದ್ರ ನಾವಂತು ಒಂದ್ರು ಪಾಯಕ ತಾಸನೆಂಗ ಬಾಡಿಗಿ ಸೈಕಲ್ ತೊಗಂಡ ಹೊಡೆದು, ಬಿಸಿಲು ಬ್ಯಾಗಿ ಅನದಂಗ ಕಾಲಾಗ ಚಪ್ಪಲ್ಲ ಇಲ್ಲದಂಗ ಅಡ್ಡ್ಯಾಡಿದ್ದ ಅಡ್ಯಾಡಿದ್ದು… ಹಿರೇರ ಕಿರೇರ ಅಂತಿದ್ವಿ ಯಾರರ ಏನರ ಕೆಲಸ ಹೇಳಿದ್ರ ಕೇಳಿತಿದ್ವಿ, ಈಗಿಂದ ಕಥಿ ದ್ವಾಡದ ಐತಿ ಮನ್ಯಾನ ಮಕ್ಕಳ ಮಾತ ಕೇಳದಂತಾ ಕಾಲ ಬಂದೇತಿ. ಎಲ್ಲೇರ ಯಾರರ ಹೋಗಬೇಕಂದ್ರ ನಡಕಂತ ಹೋಗತಿದ್ರು. ಈಗ ಎಲ್ಲಿ ಹೋಂಟ್ರು ಗಾಡಿ ಕೇಳತಾರ.
ಆದರೀಗ ಇವತ್ತ ನಾವಿರೋದು ನಗರದಾಗ ಯಾರನ್ನರ ಕೇಳು? ಹೇಳೋದು ಭಾರಿ ಡಿಸ್ಕಶನ್ ಬರೇ ಜಡ್ಡಿಂದ, ಅರಾಮಿದಿಯನ ಅಂತ ಯಾರನರ ಕೇಳಂಗಲ್ಲ ನೋಡ. ಏನ್ ಅರಾಮ ಅಂತಾರ ಆದರವಾಗ ನನಗೇನಾಗೇತಿ ಅಂತ ಕೇಳದಕ್ಕ ಮುಂಚೇನ ಅಂತಿದ್ರು. ಇದ ವ್ಯತ್ಯಾಸ ಆಗ್ಯು ಈಗ್ಯು ಎಲ್ಲದಕ್ಕೂ ಮನಸ್ಸು ಕಾರಣರಿ.. ಮತ್ತೆ ಈ ವಾಕ್ ಅಂತಾ ಹೋದಾಗ ಕೇಳಬೇಕು ಎಲ್ಲಾ.
ಬರೀ ಬಿಪಿ, ಶುಗರ್, ಥೈರೊಡ್, ಕೊಲೆಸ್ಟ್ರಾಲ್, ಹಾರ್ಟ ಮಾತ್ರೆ ತುಗೋಳೋ ವಿಷಯನ ಒಂದೆಡೆ ಇರಲಿ ಎಲ್ಲೆಲ್ಲಿ ಎಷ್ಟೆಷ್ಟು ಡಿಸ್ಕೌಂಟು, ಆಫರ್ ಇದೆ ಎನ್ನುವುದೇ ಹೆಚ್ಚು ಚರ್ಚಾ ವಿಷಯ ಅಲ್ಲರಿ ಆರೋಗ್ಯದ ಸಲುವಾಗಿ ವಾಕ್ ಹೋಗೇವಿ ಅನಾರೋಗ್ಯದ ಮಾತ್ಯಾಕ ಅವಾಗ ಇದ ತಪ್ಪು ನಾವು ಮಾಡದು ಇದಲ್ಲಾ ಇರಲಿ ಕಾಯಿಲೆ ಖಾಲಿ ಜಡ್ಡು ಇಲ್ಲದಂಗ ಚೆಕ್ ಮಾಡಿಸಿಕೊಳ್ಳ ಜನ ಬಹಳ ಆಗ್ಯಾರ ಉತ್ಸುಕರಾಗಿದ್ದಾರೆ ಮತ್ತು ಶುಗರಂತು ಪಾಸ್ಟಿಂಗ ಪೋಸ್ಟ್ ಚೆಕ್ಕಪ್ಪಂತೂ ಹೇಳತೀರದು. ಆರೋಗ್ಯದ ಬಗ್ಗೆ ಕಾಳಜಿ ಇರಬಾರದು ಅಂತಾ ಅಲ್ಲ ನನ್ನ ಹೇಳಿಕೆ ಅತಿಯಾದ ಕಾಳಜಿಯೇ ಕಾಯಿಲೆಗಳಾಗಿ ಪರಿವರ್ತನೆ ಯಾಗದಿದ್ದರೆ ಸಾಕು. ಇದ ನನ್ನ ಉದ್ದೇಶ ಮತ್ತು ಅನಿಸಿಕೆ.
ಯಾಕೆಂದರೆ ನನಗೆ ಎಲ್ಲರೂ ತೊಗೊಳ್ತಿರೊ ಮಾತ್ರೆ ಅದರ ಎಫೆಕ್ಟ್, ಸೈಡ್ ಎಫೆಕ್ಟ್‌ಗಳು ಗೊತ್ತು ಯಾಕಂದರ ನಾನೊಬ್ಬ ಆಯುರ್ವೇದ ವೈದ್ಯ. ಇಪ್ಪತ್ತೊಂದು ವರ್ಷದಿಂದ ವೈದ್ಯ ವೃತ್ತಿಯಲ್ಲಿದಿನಿ. ಹಳ್ಳಿ ಯೋಳಗ ಶಹರದಾಗ ಎರಡೂ ಕಡೆನೂ ಡಾಕ್ಟರ್ಕಿ ಮಾಡದರಿಂದ ನನಗೆ ಎರಡು ಕಡೆ ಕಾಯಿಲೆಗಳು ಬರುವ ಹೊಗುವ ಮತ್ತು ಜನ ಅದನ್ನ ಸ್ವೀಕಾರ ಮಾಡೋ ರೀತಿ ನಾನು ಕಂಡನಿ ಕಾಣ್ತಾನ ಅದನೀ.
ಆದರೆ ಇವೆಲ್ಲವುಗಳಿಗೆ ಕಾರಣಗಳ ಹುಡುಕಿ ಜೀವನ ದಾರಿನ ಒಮ್ಮಕ್ಲೆ ಬದಲಾಯಿಸು ಅಂದರ ಸಾಧ್ಯ ಇಲ್ಲ. ಯಾಕಂದರ ಭಾವಿ, ಹೊಳಿ ನೀರು, ಅವತ್ತಿನ ಆಹಾರ ವಿಹಾರ, ಜೀವನ ಶೈಲಿ ಎಲ್ಲಿಂದ ತರೋದು ಸಾಧ್ಯವಿಲ್ಲ ಈಗ ಯಾಕೆಂದರೆ ಭರದ ಬದುಕು ಓಡಲೇ ಬೇಕು ದಿನ ಪ್ರತಿದಿನಾನು.
ಅದೇನೇ ಇರಲಿ ಆರೋಗ್ಯ ಸಂರಕ್ಷಣೆ ಮತ್ತು ಜಾಗ್ರತೆಯ ಬಗ್ಗೆ ವಿಶೇಷವಾಗಿ ವೈದ್ಯರ ಸಮಾಲೋಚನೆ ಮತ್ತು ಹೇಳಿದ ವಿಚಾರಗಳ ವಿಮರ್ಶೆ ಮಾಡಿಕೊಂಡು ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬದುಕುವ ಬಗ್ಗೆ ಅವಲೋಕನ ಅತೀ ಅವಶ್ಯ ಐತೀಗ. ಅದಲ್ಲದ ಈ ಮನ್ಯಾಗ ನಾವೇನ್ ಅರಿಶಿನ ಮತ್ತು ಶುಂಟಿ, ಸಾಸಿವೆ, ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ ಬಳಸೋದಕ್ಕೆ ಡೋಸೆಜ್ ಕೇಳೋ ಕಾಲ ಇದಾಗಿದೆ. ನಮ್ಮ ಹಿರಿಯರು ಇವನ್ನೆಲ್ಲ ಬಳಸೇ ಇಲ್ಲವಾ ಅಥವಾ ಇವಕೆಲ್ಲ ಸಂಶೋಧನೆ ಬೇಕಾ ಎಂಬುದು ಅರ್ಥವಾಗದ ಮಾತು.
ಮತ್ತೆ ಗುರಳ್ಳ ಮತ್ತು ಅಗಸಿ ಚಟ್ನಿ,ಸಜ್ಜಿ, ಸಾಂವಿಯಂತಹ ಮತ್ತ ಬೇರೆ ಬೇರೆ ಆರೋಗ್ಯ ಕೊಡ ಆಹಾರ ಮಾಯವಾಗಿ ಹೋಗ್ಯಾವ.. ಹೊಂಟಾವು ಅಂತಾ ಆಹಾರದಾಗ ಎಲ್ಲಾ ಜೀವಸತ್ವ, ಮೈಕ್ರೋ-ಮ್ಯಾಕ್ರೋನ್ಯೂಟ್ರಿಯೆಂಟ್ಸ, ಮಿನರಲ್ಸ್‌ಗಳು, ಅಂಟಿ ಆಕ್ಸಿಡಂಟ್‌ಗಳ ಇಲ್ಲಂದ್ರ ಹೇಂಗ ಆರೋಗ್ಯ ಸಂರಕ್ಷಣೆ ಸರಿಯಕ್ಕತಿ. ಮುತ್ತಿನಂತಹ ಆರೋಗ್ಯದ ವಿಚಾರ ಹೇಳೋದಂದ್ರ ನಮ್ಮಲ್ಲಿ ಚಟುವಟಿಕೆ ಕಡಿಮೆ ಆಗ್ತಾ ಇದೆ ಬೇರೆಯವರ ಮೇಲೆ ಅವಲಂಬನೆ ಜಾಸ್ತಿ ಆಗಿದ್ದೇವೆ. ನಮ್ಮ ಕೆಲಸ ಕಾರ್ಯಗಳನ್ನು ನಾವು ಹೆಚ್ಚಾಗಿ ಮಾಡಿಕೊಳ್ಳುತ್ತಿಲ್ಲ.
ಬಳಸುವ ಬೈಕಿನಿಂದ ಹಿಡಿದು ಕೈಯಿಂದ ಒತ್ತುವ ರಿಮೋಟ್ ಥರಾನೇ ಎಲ್ಲಾ ಇರಲಿ ಎಂದು ರೂಢಿಯಾಗಿರುವ ಜೀವನ ಶೈಲಿಯಿಂದ ಮುಕ್ತರಾಗಬೇಕು. ಈ ಹಿಂದೆ ಹೇಗೆ ನಮ್ಮ ಹಿರಿಯರು ಚಟುವಟಿಕೆಯಿಂದ ದುಡಿಮೆಯೇ ಬದುಕು ಎನ್ನುವ ಧೇಯೋದ್ದೇಶ ಇಟ್ಟುಕೊಂಡು ಬದುಕಿದರೊ ಮತ್ತು ಕೈ ಕೆಸರಾದರೆ ಬಾಯಿ ಮೊಸರೆಂಬ ಒಳ ಗುಟ್ಟಿದು ಇದರಿಂದ ಮಾತ್ರ ಸದೃಢ ಆರೋಗ್ಯದಿಂದ ಬದುಕಲು ಸಾಧ್ಯ ಎನ್ನುವುದು ನನ್ನ ಆಶಯ ಮತ್ತು ಅಭಿಪ್ರಾಯ. ನಮ್ಮ ಹಿರಿಯರು ಹೀಗೆಯೇ ಸದೃಢ ಕಾಯ ಕಾಯಕದಿ ಕಾಯಕವೇ ಕೈಲಾಸ ವೆಂದು ನಂಬಿ ನೂರಾರು ವರ್ಷ ಬದುಕಿದ್ದರು. ಈಗ ನಾವು ಹೇಗೆ ಬದುಕಿದ್ದೇವೆ ಎನ್ನುವುದರ ಕುರಿತು ಅವಲೋಕನ ಮಾಡಿಕೊಳ್ಳಬೇಕಾದ ಸಮಯವಿದು.
“ಸ್ವಚ್ಛ ಶರೀರ ಸತ್ವಯುತ ಆಹಾರ”
“ಚಟುವಟಿಕಿನ ದಿಟವಾದ ಆರೋಗ್ಯ”
ಕಾಡಂತ ಕೋರೋನಾ ಬಂದರು ಗಟ್ಟಿಯಾರ್ಬೇಕು ಅಂದರ
“ಎಚ್ಚರಾಗಬೇಕು ಇಲ್ಲಾಂದ್ರ ಹುಚ್ಚರಾಗ್ತೇವಿ”

– ಇಂತಿ ನಿಮ್ಮವ
   ಆಯುರ್ವೇದ ವೈದ್ಯ ಸಂಗಮೇಶ ಡಾಕ್ಟರ್
 “ಮಲ್ಲಿಕಾರ್ಜುನ ಕ್ಲಿನಿಕ್”
ತವರಮೆಳ್ಳಿಹಳ್ಳಿ, ನರೇಗಲ್, ಹಾವೇರಿ
    ಮೊಬೈಲು-೯೯೮೦೦೮೪೮೦೦.

Comments