"ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ"
ಮನುಷ್ಯನ ಮನಸ್ಸು
ಕುರಿತಾದ ಒಂದು ಲೇಖನ...
___________________________________
ಮನುಷ್ಯ ಸಂಘಜೀವಿ ಸಮಾಜದಲ್ಲಿ ಸಂಪರ್ಕಕ್ಕೆ ಬರುವ ಎಲ್ಲರೊಂದಿಗೆ ಸ್ವಾಸ್ಥ್ಯದಿಂದ ಸಮ ಚಿತ್ತನಾಗಿ ಮತ್ತು ಸಮಾಜಮುಖಿಯಾಗಿ ಬದುಕುವುದು ಅವಶ್ಯವಿರುತ್ತದೆ.ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ ಬರೀ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಸದೃಢವಾಗಿರುವುದು ಅತೀ ಅವಶ್ಯಕವಾಗಿರುತ್ತದೆ.ಅಂದಾಗ ಮಾತ್ರ ಸ್ವಸ್ಥ ಎಂದು ಹೇಳಬಹುದಾಗಿದೆ.
ಇವತ್ತಿನ ಸಮಾಜದಲ್ಲಿ ನಮ್ಮ ಬೇಕು-ಬೇಡ ಗಳಿಗನುಸಾರವಾಗಿ
ಇಷ್ಟಾರ್ಥಗಳಿಗನುಗುಣದಿಂದ ಒತ್ತಡದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಹೆಚ್ಚಿನ ಜನರು ಕೌಟುಂಬಿಕ ಸಮಸ್ಯೆಗಳು,ಆರ್ಥಿಕ ತೊಂದರೆಗಳು,ಮಾನಸಿಕ ಒತ್ತಡ
ಇತ್ಯಾದಿಗಳಿಂದ ಹೆಚ್ಚು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಇದು ಜನರ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತಿದ್ದಾರೆ.
ಮಾನಸಿಕ ಒತ್ತಡಕ್ಕೆ ಮನುಷ್ಯಸಿಲುಕಿದರೆ ಸಮಸ್ಯೆಯಿಂದ ಹೊರಬರಲು ಒದ್ದಾಡುತ್ತಿದ್ದರೆ ಈ ಕೆಲವು ಸಲಹೆಗಳು ಅನುಸರಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಸಾಮಾನ್ಯವಾಗಿ ನಮಗೆ ಹೇಗೆ ಕೈ ನೋವು, ಕಾಲು ನೋವು, ತಲೆ ನೋವು, ಬೆನ್ನು ನೋವು ಬರುತ್ತದೋ, ಹಾಗೆಯೇ, ಬೇರೆ ಬೇರೆ ರೀತಿಯ ಮಾನಸಿಕ ಸಮಸ್ಯೆಗಳು ಬರಬಹುದು. ಅದು ಉಲ್ಬಣಿತ ಕೋಪದಿಂದ ಹಿಡಿದು ತೀವ್ರತರನಾದ ಸಮಸ್ಯೆಗಳವರೆಗೂ ವ್ಯಾಪಿಸಿರಬಹುದು.ಆದರೆ ತೀವ್ರತರನಾದ ಸಮಸ್ಯೆಗಳು ಏಕಾಏಕಿ ಬರುವುದಿಲ್ಲ.ಅವು ಬರುವುದೇ ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದಾಗ. ಹೇಗೆ ಶರೀರದಲ್ಲಿರುವ ಹುಳುಕುಗಳನ್ನು ಆರಂಭದಲ್ಲಿಯೇ ಕಿತ್ತು ತೆಗೆಯಬೇಕೋ, ಹಾಗೆಯೇ ಮಾನಸಿಕ ಕ್ಲೇಶಗಳನ್ನು ಆರಂಭದಲ್ಲಿಯೇ ಬೇರಿನಿಂದಲೇ ಕಿತ್ತು ತೆಗೆಯಬೇಕು. ಆವಾಗ ಜೀವನ ಹಗುರವಾಗುತ್ತದೆ.
ಹಾಗಾಗಿ ಮಾನಸಿಕ ಆರೋಗ್ಯದ ಕುರಿತು ಸಾಂಘಿಕ ಹೋರಾಟದ ಅಗತ್ಯವಿದೆ. ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಮಂದಿ ಚರ್ಚೆ ಮಾಡಬೇಕು. ತಮ್ಮ ಅಂತಸ್ತು, ಸಾಮಾಜಿಕ ಸ್ಥಾನಮಾನದ ಪೊರೆಗಳನ್ನು ಕಳಚಿಕೊಂಡು ಆಂತರ್ಯದ ಮನುಷ್ಯನನ್ನು ಕಂಡುಕೊಳ್ಳಬೇಕು.
ಕೇವಲ ತೀವ್ರತರನಾದ ಮಾನಸಿಕ ಸಮಸ್ಯೆಗಳಷ್ಟೇ ಅಲ್ಲದೆ, ಇತರೆ ಭಯಗಳನ್ನು, ಋಣಾತ್ಮಕ ಚಿಂತನೆಗಳನ್ನು ಆರಂಭದಲ್ಲೇ ಗಂಭೀರವಾಗಿ ಪರಿಗಣಿಸಿ, ಸರಿಪಡಿಸಿಕೊಳ್ಳಬೇಕು. ಅನಾವಶ್ಯಕವಾಗಿ ಬೇಸರಗಳನ್ನು, ಕೋಪಗಳನ್ನು, ಮನಸ್ತಾಪಗಳನ್ನು ಅನೇಕ ವರ್ಷಗಳವರೆಗೆ ಮನದಲ್ಲೇ ಹೊತ್ತುಕೊಂಡು ಅದರಿಂದಾಗಿ ತಮ್ಮ ಇತರೆ ಸಂಬಂಧಗಳನ್ನು ಹಾಳುಮಾಡಿಕೊಳ್ಳುವ ಬದಲು, ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು.
ಜ್ವರ ಬಂದಾಗ, ಶೀತವಾದಾಗ ಹೇಗೆ ವೈದ್ಯರ ಬಳಿ ಹೋಗುತ್ತೇವೋ, ಹಾಗೆಯೇ, ಮಾನಸಿಕ ಏರುಪೇರಾದಾಗ ಮನಃಶಾಸ್ತ್ರಜ್ಞರ ಬಳಿ ಹೋಗಬೇಕು. ಇತರರು ಏನು ಹೇಳುತ್ತಾರೋ, ಏನು ಅಂದುಕೊಳ್ಳುತ್ತಾರೋ ಎಂಬುದನ್ನೇ ಮುಖ್ಯ ಸಮಸ್ಯೆಯನ್ನಾಗಿ ಮಾಡಿಕೊಂಡರೆ, ನೀವೇ ನಿಮ್ಮ ಜೀವನದ ಸುಂದರ ಕ್ಷಣಗಳಿಗೆ ಕಲ್ಲು ಹಾಕಿದಂತಾಗುತ್ತದೆ.
ಇಷ್ಟೇ ಅಲ್ಲದೆ ನಿಮ್ಮ ಬಂಧು ಮಿತ್ರರು ಯಾರಾದರೂ ಏನಾದರೂ ಮಾನಸಿಕ ಕ್ಲೇಶಕ್ಕೊಳಗಾಗಿದ್ದರೆ, ಅವರಿಗೆ ನಿಮ್ಮ ಬೆಂಬಲ ಇದೆ ಎಂಬುವುದನ್ನು ದೃಢಪಡಿಸಿ, ಧೈರ್ಯ ತುಂಬಬೇಕು. ವಿಭಕ್ತ ಕುಟುಂಬಗಳ ಪರಿಸ್ಥಿತಿಯಲ್ಲಿ, ಎಲ್ಲರು ತಮ್ಮ ತಮ್ಮ ಜೀವನದ ಕುರಿತು ಅಷ್ಟೇ ಯೋಚನೆ ಮಾಡುವ ಈ ದಿನಗಳಲ್ಲಿ, ಮಾನವಿಕ ಸಂಬಂಧಗಳನ್ನು ಗಟ್ಟಿಗೊಳಿಸಿ, ಹೊಸರೀತಿಯ ಅವಿಭಕ್ತತೆಯನ್ನು ಉಂಟು ಮಾಡಬೇಕು. ಆವಾಗಲೇ, ನಾವು ಮಾನಸಿಕವಾಗಿ ಆರೋಗ್ಯವಂತ ಸಮಾಜವನ್ನು ಕಟ್ಟಬಹುದು.
ಎಲ್ಲವೂ ಇದ್ದು ಮಾನಸಿಕ ನೆಮ್ಮದಿಯೇ ಇಲ್ಲದಿದ್ದರೆ, ಜೀವನದ ಸೊಗಡು ಬರಿದಾಗುತ್ತದೆ.
ಮಾನಸಿಕ ಒತ್ತಡಕ್ಕೆ ಕೆಲವು ಸಲಹೆಗಳು...
ಉತ್ತಮ ಆಹಾರ ಪದ್ಧತಿ ನಾವು ಪ್ರತಿನಿತ್ಯ ಪೌಷ್ಟಿಕಯುಕ್ತ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರ. ಇದು ನಿಮ್ಮ ಆರೋಗ್ಯದ ಜತೆಗೆ ಮುಖ್ಯವಾಗಿ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗೂ ಅನಗತ್ಯ ಆಲೋಚನೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಹಾಗಿರುವಾಗ ಖನಿಜಾಂಶಗಳು, ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ.
ಅತಿರೇಕವಾಗಿ ಯೋಚಿಸಬೇಡಿ....
ಕೆಲವು ವಿಷಯಗಳನ್ನು ಅತಿರೇಕವಾಗಿ ಯೋಚಿಸುವುದು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸಬಹುದು. ಅನಗತ್ಯ ಯೋಚನೆಗಳಿಂದ ಆದಷ್ಟು ದೂರವಿರಿ. ಇದು ನಿಮ್ಮ ಮನಸ್ಸಿಗೆ ಹೆಚ್ಚು ಪರಿಣಾಮವನ್ನು ಬೀರುತ್ತವೆ. ಯಾವುದೇ ಒಂದು ವಿಷಯವನ್ನು ಅತಿಯಾಗಿ ಯೋಚಿಸುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡುತ್ತವೆ.
ಒಂಟಿತನದಿಂದ ದೂರವಿರಿ.....
ಆದಷ್ಟು ಜನರೊಂದಿಗೆ ಬೆರೆಯುವ ಅಭ್ಯಾಸ ಮಾಡಿಕೊಳ್ಳಿ. ಒಂಟಿಯಾಗಿರುವುದರಿಂದ ನೀವು ಹೆಚ್ಚು ಯೋಚಿಸುತ್ತೀರಿ. ಜತೆಗೆ ಅನಗತ್ಯ ಯೋಚನೆಗಳು ನಿಮ್ಮನ್ನು ಹೆಚ್ಚು ಕಾಡುತ್ತವೆ. ಜನರೊಡನೆ ಹೆಚ್ಚು ಬೆರೆಯುವ ಅಭ್ಯಾಸ ಮಾಡಿಕೊಳ್ಳುವ ಮೂಲಕ ನೀವು ಅನಗತ್ಯ ಚಿಂತೆಗಳನ್ನು ದೂರಮಾಡಿಕೊಳ್ಳಬಹುದು. ಹೆಚ್ಚು ಖುಷಿಯಾಗಿರಬಹುದು. ಇದರಿಂದ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
ಮದ್ಯಪಾನದಿಂದ ದೂರವಿರಿ....
ಮದ್ಯಪಾನ ಅಥವಾ ಧೂಮಪಾನ ಎಂದಿಗೂ ಆರೋಗ್ಯ ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯವನ್ನು ಒತ್ತಡಕ್ಕೆ ಸಿಲುಕಿಸುತ್ತದೆ. ಜತೆಗೆ ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ. ಜತೆಗೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಬಹುಬೇಗ ಕುಂಠಿತಗೊಳ್ಳುತ್ತದೆ. ಹಾಗಾಗಿ ಆದಷ್ಟು ಮದ್ಯಪಾನದಿಂದ ದೂರವಿರಿ.
ವ್ಯಾಯಾಮ ಯೋಗಾಭ್ಯಾಸ ಪ್ರತಿನಿತ್ಯ ಮಾಡಿ
ಪ್ರತಿದಿನ ವ್ಯಾಯಾಮ ಅಭ್ಯಾಸಗಳನ್ನು ಮಾಡುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಬೆಳಿಗ್ಗೆ ಎದ್ದು ವಾಕಿಂಗ್, ಜಾಗಿಂಗ್ ಅಥವಾ ಧ್ಯಾನದಲ್ಲಿ ತೊಡಗಿಕೊಳ್ಳಿ. ಇಲ್ಲವೇ ಯೋಗಾಸನಗಳನ್ನು ಮಾಡುವ ಅಭ್ಯಾಸವನ್ನು
ರೂಢಿಯಲ್ಲಿಟ್ಟುಕೊಳ್ಳಿ ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.
ನಾವು ಆಕಾಂಕ್ಷಿಸುವ ಉದ್ಯೋಗ, ಹಣ, ಸೌಕರ್ಯ, ಸವಲತ್ತು ಇವೆಲ್ಲವುಗಳನ್ನೂ ಮೀರಿ, ಜೀವನದಲ್ಲಿ ಆನಂದವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದಕ್ಕೋಸ್ಕರವೇ, ಮಾನಸಿಕ ಆರೋಗ್ಯದ ಕುರಿತು ನಾವು ಆರಂಭದಿಂದಲೇ ಜಾಗರೂಕರಾಗಿದ್ದು, ನಮ್ಮ ಮಕ್ಕಳಿಗೆ, ವಯಸ್ಕರಿಗೆ ಮತ್ತು ಹಿರಿಯರಿಗೆ ಯಾವುದೇ ರೀತಿಯ ಸಾಮಾಜಿಕ ಭೇದಗಳಿಲ್ಲದೆ ಮನಸ್ಸಿನ ಮಾತುಗಳನ್ನು ಕೇಳುವ ಮೂಲಕ ಉನ್ನತವಾದ ಸಮಾಜವನ್ನು ಕಟ್ಟುವಲ್ಲಿ ಒಂದಾಗೋಣ.
ವಿಶ್ವ ಮಾನಸಿಕ ಆರೋಗ್ಯ ದಿನವಾದ ಇಂದು, ನಮ್ಮೆಲ್ಲರ ಆರೋಗ್ಯಕ್ಕೆ ಕೈಜೋಡಿಸೋಣ.
Comments
Post a Comment